ಲೇಖನ ಹುಡುಕಿ

Friday, October 15, 2021

ಕಳ್ಳ ಮನಸು ಮಳ್ಳು ಬದುಕೂ

 


ಬಡತನ ಅಂದರೆ ಏನು? ತಿಳಿದುಕೊಳ್ಳುವುದಕ್ಕೂ ಮೊದಲು ಅನುಕೂಲ/ಶ್ರೀಮಂತಿಕೆ ಎನ್ನುವುದನ್ನು ತಿಳಿಯಬೇಕು. ಕೈಯಲ್ಲಿ ಹಣವಿದ್ದು ಸಾಲವಿಲ್ಲದೆ ಬೇಕಾದ್ದನ್ನೆಲ್ಲ ಆರಾಮಾಗಿ ಕೊಂಡು, ಕಂಡಲ್ಲೆಲ್ಲ ನಮ್ಮದೇ ಖರ್ಚಿನಲ್ಲಿ  ಓಡಾಡಬಹುದಾದ ಸ್ಥಿತಿಯೆ ಅನುಕೂಲವಾಗಿರುವುದು ಎನ್ನಬಹುದು. ಇದಕ್ಕೆ ವಿರುದ್ಧವಾದ ಸ್ಥಿತಿ ಬಡತನ. ಈ ಬಡತನ ಮತ್ತು ಸಿರಿತನ ಜೀವನದ ಎರಡು ಮುಖಗಳು. ನಾನು ಈ ಎರಡು ಮುಖವನ್ನೂ ಬಲ್ಲೆ. ಯಾವುದು ಹೆಚ್ಚು ಇಷ್ಟ ಎಂದು ಕೇಳಿದರೆ ಎರಡೂ ಇಷ್ಟ, ಎರಡೂ ಇಷ್ಟವಿಲ್ಲ. ಎರಡೂ ಒಂದು ಹಂತದವರೆಗೆ ಬಹಳ ಚೆಂದ. ಅವುಗಳ ಗಡಿ ದಾಟಿದಾಗ ಎರಡೂ ಮಗ್ಗುಲಲ್ಲಿ ಚುಚ್ಚುವ ಗುಲಾಬಿ ಹೂವಿನ ಮುಳ್ಳಿನಂತೆ.ನನ್ನದೇ ಉದಾಹರಣೆ ತೆಗೆದುಕೊಳ್ಳಿ


ಹನ್ನೆರಡನೇ ವರ್ಷದ ವರೆಗೆ ವಾರದಲ್ಲೊಂದೆರಡು ದಿನ ಬಡತನದ ದರ್ಶನವಾಗುತ್ತಿತ್ತು. ಹುಲ್ಲಿನ ಮನೆ. ಮಣ್ಣಿನ ನೆಲ. ಕನಕಾಂಬರ ಹೂ ಬೆಳೆದು, ಕಟ್ಟಿ ಮಾರುತ್ತಿದ್ದ ಅಮ್ಮ. ಬಾಳೆಕಾಯಿ, ತರಕಾರಿ ಕೊಟ್ಟು ಅದರೊಂದಿಗೆ ಬದುಕು ಸಾಗಿತ್ತು. ವಾರಕ್ಕೊಮ್ಮೆ ಮನೆಗೆ ಹೋದರೆ ಹೂಬಿಡಿಸಲು, ಹೂಕಟ್ಟಲು ಅಮ್ಮನಿಗೆ ನೆರವಾಗುತ್ತಿದ್ದೆ. ಬೇಸಿಗೆ ರಜೆಯಲ್ಲಿ ಧಾನ್ಯಗಳನ್ನು ಕೀಳುತ್ತಿದ್ದೆವು. ಹಸು, ಕರು, ನಾಯಿಗಳ ಕಜ್ಜಿ, ಗಾಯಗಳನ್ನು ನಾನು ಅಮ್ಮ ಸೇರಿ ಸ್ವಚ್ಛಗೊಳಿಸಿ ಔಷಧಿ ಹಾಕುತ್ತಿದ್ದೆವು. ತರಕಾರಿ ಬೆಳೆಗಳು, ಭತ್ತ, ಧಾನ್ಯಗಳ ಬೆಳೆಗಳ ಮಧ್ಯೆ ನನಗೆ ಅದಮ್ಯ ಆನಂದವಿತ್ತು.  ಮಧ್ಯಮ ವರ್ಗದ ಅಜ್ಜಿಮನೆಯ ಕರೆಂಟು ಬೆಳಕಿಗಿಂತ ಮನೆಯ ಚಿಮಣಿಬುರುಡೆ ಅಪ್ಯಾಯವಾಗಿತ್ತು. 


ಕುಟುಂಬದಲ್ಲಿ ಆಗಾಗ ಮೂದಲಿಕೆ ಇತ್ತು. ನೀನೇ ದೊಡ್ಡವಳು. ಎಲ್ಲರ ಜವಾಬ್ದಾರಿ ಇದೆ. ಸ್ವಲ್ಪವಾದ್ರೂ ಗಮನ ಕೊಟ್ಟು ಓದು. ಬೇರೆ ಪುಸ್ತಕ, ಆಟಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರವು! 25/25 ಬಂದ್ರೂ ಅಷ್ಟೆ. 23/25ಬಂದ್ರೂ ಅಷ್ಟೆ. ನನಗೆ ಈ ಭಾಷೆ ಇಷ್ಟವಿಲ್ಲ, ನನಗೆ ಬರುವುದೇ ಇಷ್ಟು ಎಂದು ಉತ್ತರ ಪತ್ರಿಕೆಯಲ್ಲಿ ಬರೆದುಬಂದಾಗಲೂ ಅಷ್ಟೇ. ಜವಾಬ್ದಾರಿ ಇದೆ, ಏನೂ ಸಾಕಾಗದು. ಯಾತಕ್ಕೂ ಬಾರದು. 

ಹಾಗಿದ್ದರೂ ನಾನು ಊರ ದೊಡ್ಡ, ಚಿಕ್ಕ ಹುಡುಗರ ಜೊತೆಗೆ ಇಡೀ ದಿನ ಗಿಲ್ಲಿದಾಂಡು ಆಡುತ್ತ, ಕಾಡುಮೇಡು ಅಲೆಯುತ್ತ ಆನಂದದಿಂದ ಇದ್ದೆ. ಟಿವಿ ಇದ್ದ ಮನೆಗಳಲ್ಲಿ ನೋಡಲು ಬಿಡದೆ ಆರಿಸಿದಾಗ ಇನ್ಯಾರದ್ದೋ ಮನೆಯ ಕಟ್ಟೆಯ ಮೇಲೆ ತರಂಗ, ಸುಧಾ, ಮಹಾಭಾರತ ಓದುತ್ತ ಪ್ರತ್ಯಕ್ಷಳಾಗಿರುತ್ತಿದ್ದೆ. ಊರಿನ ಹಬ್ಬಗಳ, ಹಣ್ಣು, ಕಾಯಿ, ಹೊಳೆ, ಗದ್ದೆ, ತೋಟ, ಕಾಲುವೆ ಎಲ್ಲಾ ನನ್ನವೇ ಆಗಿದ್ದವು. ಯಾರ ಮನೆ, ಯಾವ ಜನ ಯಾವುದೂ ನನಗೆ ಬೇರೆ ಎನಿಸುತ್ತಲೇ ಇರಲಿಲ್ಲ. ರಜಾದಿನಗಳಲ್ಲಿ ಬೆಳಿಗ್ಗೆ ಎದ್ದ ಮೇಲೆ ಕೆಲಸಗಳನ್ನು ಮುಗಿಸಿ ಹೊರಬಿದ್ದರೆ ಮಧ್ಯಾಹ್ನ ಊಟಕ್ಕೆ ಹಾಜರು. ಮಧ್ಯಾಹ್ನ ಕೆಲಸಗಳನ್ನು ಮುಗಿಸಿ ಹೊರಬಿದ್ದರೆ ರಾತ್ರಿ 8-9ಕ್ಕೆ ಹಾಜರು. ರಜೆ ಇಲ್ಲದಾಗ ಶಾಲೆ. ಶಾಲೆ ಅವಧಿ ಮುಗಿದ ಮೇಲೆ ಅದೇ ಊರ ಸುತ್ತಾಟ. ಜೀವನದ ಪ್ರತಿ ಮಗ್ಗಲನ್ನೂ ಶೋಧಿಸಿ, ಅದ್ಯಾಕೆ, ಇದ್ಯಾಕೆ ಹುಡುಕುವುದಕ್ಕೇ ಸಮಯ ಸಾಲುತ್ತಿರಲಿಲ್ಲ. ತಲೆತುಂಬ ಪ್ರಶ್ನೆಗಳಿದ್ದಾಗ ನಾನು ಹೆಣ್ಣು, ಕತ್ತಲಾಗುವುದರೊಳಗೆ ಮನೆಗೆ ಹೋಗಬೇಕು ಎಂಬ ಪರಿಜ್ಞಾನ ಇರುವುದು ಕಷ್ಟ. ಅದಾಗಲೇ ನಾನೊಬ್ಬ ಚೈತನ್ಯ, ದೇಹವನ್ನೂ ಮೀರಿದ ಆತ್ಮ ಎನ್ನುವ ಅರಿವಾಗಿಹೋಗಿತ್ತು. 


ಅದಕ್ಕೆ ಸರಿಯಾಗಿ ಅಷ್ಟು ಸ್ವಚ್ಛಂದವಾಗಿದ್ದ ನನ್ನ ಮೇಲೆ ಯಾವ ಗಂಡಸರೂ ಅಷ್ಟಾಗಿ ಅನುಚಿತವಾಗಿ ವರ್ತಿಸಿರಲಿಲ್ಲ. (ಅಕ್ಕಂದಿರು, ಸಹಪಾಠಿಗಳು ಬಹಳ ತರಬೇತಿ ಕೊಡಲು ಪ್ರಯತ್ನಿಸಿದರು. ಕೊನೆಗೆ ಆಗದೆ ಇದೊಂದು ಜಾಣಪೆದ್ದು ಎಂದು ದೂರವಿಟ್ಟರು)

ಆ ವಿಷಯದಲ್ಲಿ ಅತೀ ಮುಗ್ಧಳಾಗಿದ್ದ ನನ್ನನ್ನು ಬಳಸಿಕೊಳ್ಳಲು ಬಂದಿದ್ದ "ಒಬ್ಬ" ಅಣ್ಣನನ್ನು ಛಿ ನೀನು ಸರಿ ಇಲ್ಲ ಎಂದು ತಳ್ಳಿ ಬಂದಿದ್ದೆ. ಆ ನಂತರ  ದೂರದಿಂದಲೇ ತಪ್ಪಿಸಿಕೊಂಡು ಬಿಡುತ್ತಿದ್ದೆ. ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಮಗುವಿನ ಕಾಲ್ಗೆಜ್ಜೆ ಕಾಣೆಯಾಯಿತು. ಅದನ್ನು ಅವರ ಮನೆಯಲ್ಲೇ ಸದಾ ಅದು ಇದು ಓದಿಕೊಂಡಿರುವ ನಾನೇ ತೆಗೆದುಕೊಂಡಿದ್ದು ಎನ್ನುವ ಮಾತು ಬಂತು. ಹಾಗಂತ ನನ್ನ ಕರೆದು ಕೇಳಲಿಲ್ಲ. ಮನೆಯ ಹಿರಿಯರಿಗೆ ಹೇಳಲಾಯಿತು. ಆಗ ಮೊದಲ ಬಾರಿಗೆ ಓ ಬೆಳ್ಳಿಯ ವಸ್ತುಗಳು ಇಷ್ಟೊಂದು  ಮೂಲ್ಯ ಮತ್ತು ಅವುಗಳಿಂದ ಕಳ್ಳತನದ ಅಪವಾದವೂ ಬರಬಹುದು ಎಂದು ಅರ್ಥವಾಯಿತು. ಅಷ್ಟರೊಳಗೆ ನನ್ನವೇ ಕಾಲ್ಗೆಜ್ಜೆ ಕಳೆದುಕೊಂಡು ಸಿಕ್ಕಾಪಟ್ಟೆ ಬೈಸಿಕೊಂಡಿದ್ದೆ. ಅದು ತಲೆಗೆ ಹೋಗಿರಲಿಲ್ಲ. ಆದರೆ ಯಾವಾಗ ನನ್ನದಲ್ಲದ ತಪ್ಪಿಗೆ ಆರೋಪ ಬಂದಿತೊ ಬಹಳ ನೋವಾಗಿತ್ತು.


ಇದಕ್ಕೂ ಮೊದಲೊಮ್ಮೆ ಕಳ್ಳತನದ ಅಪವಾದ ಬಂದಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ನನ್ನ ಭರವಸೆಗೆ ಕಾರಣವಾದ ಘಟನೆ ಹೇಳಿದ್ದೇನೆ. ಹೀಗೆ ಬದುಕು ಬಡತನದ ಚುರುಕು ಮುಟ್ಟಿಸುತ್ತಲೇ ಇತ್ತು. ಹೈಸ್ಕೂಲಿಗೆ ಮನೆಯಲ್ಲಿ ಓದಲು ಬಂದ ಮೇಲೆ ಬದುಕು ಇನ್ನಷ್ಟು ಸೊಗಸು ಕಂಡಿತು. ಬೆಳವಣಿಗೆಯ ತೊಂದರೆಗಳಿಂದ ಹುಟ್ಟಿದ ತಮ್ಮನಿಗೂ, ಚಿಕ್ಕ ವಯಸ್ಸಿನಲ್ಲೇ ಸಾಲು ಮಕ್ಕಳ ತಾಯಾದ ಅಮ್ಮನಿಗೂ ಪದೆ ಪದೇ ಹುಷಾರಿರುತ್ತಿರಲಿಲ್ಲ.ತಂಗಿ ಬೇರೆ ಅಜ್ಜಿ ಮನೆಯಲ್ಲಿದ್ದಳು. ಅವಳನ್ನು ನೋಡಲು ಸಹ ಹೋಗಬೇಕಾಗುತ್ತಿತ್ತು.  ಊರಿಗೆ 3 ಕಿ.ಮೀ ನಡೆದರೆ ದಿನಕ್ಕೆ ಮೂರು ಬಸ್ಸು. ತಪ್ಪಿದರೆ 5 ಕಿ.ಮೀ. ನಡೆಯಬೇಕು. ವೈದ್ಯರು ಮೂರು ದಿನದ ಔಷಧಿ ಕೊಟ್ಟು ವಾರದ ನಂತರ ಮತ್ತೆ ಬರಲು ಹೇಳುತ್ತಿದ್ದರು. ಸಾರಿಗೆ ಮತ್ತು ಬಸ್ ಚಾರ್ಜ್ ಸಮಸ್ಯೆಯಿಂದಾಗಿ ತಿಂಗಳಲ್ಲಿ 15 ದಿನ ಅಮ್ಮ ಇರುತ್ತಿರಲಿಲ್ಲ.  ಮನೆಯಲ್ಲಿ ಹಸುವನ್ನು ನೋಡಿಕೊಳ್ಳುವುದು, ಕೆಲವೊಮ್ಮೆ ಹಾಲು ಹಿಂಡುವುದು, ರೇಷ್ಮೆ ಹುಳಗಳಿಗೆ ಸೊಪ್ಪು ಬಿಡಿಸಿ, ಕತ್ತರಿಸಿ ಹಾಕುವುದು, ರೇಷ್ಮೆ ಗಿಡಗಳಿಗೆ ಗೊಬ್ಬರ ಹಾಕುವುದು, ಕೊಟ್ಟಿಗೆ ತೊಳೆಯುವುದು, ಮನೆಕೆಲಸ ಮುಗಿಸಿ ಹೈಸ್ಕೂಲಿಗೆ ಸಮಯಕ್ಕೆ ಸರಿಯಾಗಿ ಹೋಗುವುದು ನಡೆದಿತ್ತು. ಇದಲ್ಲದೆ ಶಾಲೆಯಲ್ಲಿ ಸಹ ಜವಾಬ್ದಾರಿಗಳಿದ್ದವು. ಇವುಗಳಿಗೂ ಬಡತನಕ್ಕೂ ಏನು ಸಂಬಂಧ ಕೇಳುತ್ತೀರಾ?


ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎನ್ನುವ ಮಾತಿದೆ. ಸ್ವಲ್ಪ ಹಿನ್ನೆಲೆ, ಸ್ಥಿತಿವಂತಿಕೆ ಮತ್ತು ಗಂಡು ಎಂಬ ಉಪಾಧಿ ಇರಬೇಕು ಎನ್ನುವ ಅರಿವು ಅದಾಗಲೇ ಆಗಿತ್ತು. ಶಾಲೆಯ ಸ್ಪರ್ಧೆಗಳು, ಮನೆಯಲ್ಲಿ ಸಹಕಾರಗಳು, ಜನರಲ್ಲಿ ಮೆಚ್ಚುಗೆಯ ಮಾತು ಇವೆಲ್ಲವೂ ಹಣ ಮತ್ತು ಲಿಂಗವನ್ನು ಆದರಿಸಿರುತ್ತವೆ. ಇಲ್ಲವಾದರೆ ಯಾವುದಾದರೂ ಬಲಿದಾನಕ್ಕೆ ತಯಾರಿರಬೇಕಾಗುತ್ತದೆ. ಯಾವ ಒಳ್ಳೆಯ ಗುಣಗಳು ಎಷ್ಟೇ ಇರಲಿ, ಎಷ್ಟೇ ಸಾಮರ್ಥ್ಯ ಇರಲಿ. ಸೊ ಕಾಲ್ಡ್ ಮೇಲ್ಜಾತಿಯೇ ಆಗಿರಲಿ. ಅದು ನಗಣ್ಯವಾಗಿರುತ್ತದೆ. 


ಆದಾಗ್ಯೂ ನನಗೆ ಬೇಸರವಿರಲಿ. ಹತಾಷೆ, ನಿರಾಶೆ ಎರಡೂ ಇರಲಿಲ್ಲ. ಕಟ್ಟಿಗೆಯ ಒಲೆಯಲ್ಲಿ ಒದ್ದೆಕಟ್ಟಿಗೆ ಒಣಗಿಸಿ ಅಡುಗೆ ಮಾಡುವಾಗಲೂ, ಒರಳಿನಲ್ಲಿ ಬೋಗಣಿ ಅಕ್ಕಿ ರುಬ್ಬುವಾಗಲೂ ನನಗವು ಆಟದಂತೇ ಅನಿಸುತ್ತಿತ್ತು. ಈಗಲೂ ಮಕ್ಕಳನ್ನು ಕಟ್ಟಿಕೊಂಡು ಆಡುವಾಗೆಲ್ಲ ನನಗೆ ಇವನು ಗದರುತ್ತಿದ್ದರೆ ಸುಮ್ಮನೆ ನಕ್ಕುಬಿಡುತ್ತೇನೆ. ಬಡತನ, ತರತಮ, ಅಪವಾದ, ಹಿಂದಿನ ಬಾಣ, ಮುಂದಿನ ಇರಿತ ಯಾವುದೂ ನನ್ನ ಒಳಗಿನ ಸಂತೋಷ ಕುಂದಿಸದು. ಈ ನಾಗರೀಕತೆಯ ಸೋಗು ನನ್ನ ಬಹಳಷ್ಟು ಸಂತೋಷಗಳನ್ನು ಕಸಿದಿದೆ ನಿಜ. ಆದರೆ ಕಳ್ಳ ಮನಸ್ಸು ಮಳ್ಳು ಆಡಂಬರಕ್ಕೆ ಮರುಳಾಗದೆ ತಪ್ಪಿಸಿಕೊಂಡು ಹೊಸ ಸಂತಸವನ್ನು ಕಂಡುಕೊಳ್ಳುತ್ತದೆ. ಅದಕ್ಕೆ ಗೊತ್ತು, ಈ ಮಣ್ಣಿನ ಗಂಧ, ಬೀಳುವ ಮಳೆ, ಒಗ್ಗರಣೆಯ ಘಮ, ರಂಗೋಲಿಯ ಅಂದದಂತಹ ಸಣ್ಣ ಸಣ್ಣ ಖುಷಿಗಳೇ ಬದುಕಿನ ನಿಜವಾದ ಸಂಭ್ರಮ.


 - ಶೀಲಾ ಭಟ್

ಕಳ್ಳ ಮನಸು ಮಳ್ಳು ಬದುಕೂ

  ಬಡತನ ಅಂದರೆ ಏನು? ತಿಳಿದುಕೊಳ್ಳುವುದಕ್ಕೂ ಮೊದಲು ಅನುಕೂಲ/ಶ್ರೀಮಂತಿಕೆ ಎನ್ನುವುದನ್ನು ತಿಳಿಯಬೇಕು. ಕೈಯಲ್ಲಿ ಹಣವಿದ್ದು ಸಾಲವಿಲ್ಲದೆ ಬೇಕಾದ್ದನ್ನೆಲ್ಲ ಆರಾಮಾಗಿ ಕೊಂ...