ಇತ್ತೀಚೆಗೆ ನಟಿ ಲಕ್ಷ್ಮಿ ಅವರ ಮಾತು ಬಹಳ ಚರ್ಚೆಗೆ ಕಾರಣವಾಗಿದೆ. ಸ್ನೇಹಿತೆಯೊಬ್ಬಳು ತಲೆಗೆ ಬಣ್ಣವನ್ನೂ ಹಾಕದೆ ಬಹಳ ಹೀನಾಯ ಸ್ಥಿತಿಯಲ್ಲಿ ತನ್ನನ್ನು ನೋಡಲು ಬಂದಿದ್ದರು. ಅವರ ದಯನೀಯ ನೋಟ ತನಗೆ ಇಷ್ಟವಾಗಲಿಲ್ಲ. ಹಾಗಾಗಿ ಭೇಟಿಯಾಗದೇ ಕಳಿಸಿದೆ ಎಂದಿರುವ ಅವರ ಮಾತು ಅವರ ಅಹಂಕಾರ ಮತ್ತು ಅಸಡ್ಡೆ ತೋರಿಸುತ್ತದೆ ಎಂಬುದು ಹಲವರ ವಾದ. ಆದರೆ ನನಗೆ ಹಾಗೆ ಎನಿಸುವುದಿಲ್ಲ.
ದಯನೀಯ ಸ್ಥಿತಿಯಲ್ಲಿ ಇದ್ದು ತೋರಿಸಬೇಕೆಂದರೆ ನಟಿ ಲಕ್ಷ್ಮಿ ಸಹ ಸಾಕಷ್ಟು ದುಃಖ ಮತ್ತು ಕಷ್ಟವನ್ನು ನೋಡಿದವರು. ಆದರೆ ಎಂದೂ ಕೂಡ ತನಗೆ ಕಷ್ಟ ಇದೆ, ಇತ್ತು ಯಾವುದನ್ನೂ ಹೇಳಿಕೊಂಡು ಜನರಿಂದ ಅನುಕಂಪ ಗಿಟ್ಟಿಸಲಿಲ್ಲ. ಒಂದೇ ಸಮನೆ ವೈಯಕ್ತಿಕ ಜೀವನದ ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡಬೇಕಿತ್ತು. ಬಾಲ್ಯದಿಂದಲೇ ಒಂದು ನಿಲುಮೆ ಅವರ ಬದುಕಿನಲ್ಲಿ ನನಗೆ ಗೋಚರಿಸುತ್ತದೆ. ಈ ವೈಯಕ್ತಿಕ ನೋವುಗಳಿಗೆ ತಲೆಕೆಡಿಸಿಕೊಳ್ಳಬಾರದು. ಮತ್ತು ಇದು ಯಾವತ್ತು ಬಗೆಹರಿಯದ ಸಮಸ್ಯೆ. ತಾವು ಇದಕ್ಕೆ ಹೊಂದಿಕೊಂಡು ತಲೆ ಎತ್ತಿ ಬದುಕಬೇಕು. ಆ ಬದುಕನ್ನು ಮಾತ್ರ ಜನರೊಂದಿಗೆ ತೋರಿಸಿಕೊಳ್ಳಬೇಕು. ಇನ್ನು ಒಬ್ಬ ನಟಿಯಾಗಿ ಅನುಭವಿಸುವ ಇನ್ನೊಂದು ಸಮಸ್ಯೆ. ಪಾತ್ರಗಳೇ ತಾವಾಗಿ ಬದುಕನ್ನು ಅನುಭವಿಸಿ ನಟಿಸುವುದು. ಕೆಲವು ಚಿತ್ರಗಳನ್ನು ಬಿಟ್ಟರೆ ಬಹುತೇಕ ಚಿತ್ರಗಳಲ್ಲಿ ಅವರ ಪಾತ್ರ ಅಸಹನೀಯ ನೋವಿನಿಂದಲೇ ತುಂಬಿದ್ದು. ಕತೆಯಲ್ಲ ಜೀವನದಂತಹ ಕಾರ್ಯಕ್ರಮವನ್ನು ವರ್ಷಾನುಗಟ್ಟಲೆ ನಡೆಸಿಕೊಟ್ಟಿದ್ದು. ಇಂತಹ ಸಂದರ್ಭಗಳಲ್ಲಿ ಜೀವನದ ಕಟು ಸತ್ಯವನ್ನು ಹತ್ತಿರದಿಂದ ನೋಡಿದಾಗ ಅದರಿಂದ ಮನಸ್ಸಿಗೆ ಆಗುವ ನೋವು ಬಲ್ಲವರಿಗೆ ಮಾತ್ರ ಗೊತ್ತು. ಹಾಗಾಗಿ ಆಕೆ ಇಂತಹ ನೋವಿನ ವ್ಯಕ್ತಿಗಳು, ಸಂದರ್ಭಗಳಿಂದ ದೂರ ಉಳಿಯುವುದಕ್ಕೆ ಯತ್ನಿಸಿದರೆ ಅದೂ ಸಹ ಸಹಜವೇ.
ಅವರ ನಗು, ವಿಶ್ವಾಸ ಎಲ್ಲವೂ ಸುಳ್ಳು, ನಾಟಕ ಎಂದು ನೀವು ಹೇಳಬಹುದು. ಆದರೆ ಅದು ನಾಟಕವಲ್ಲ. ಒಬ್ಬ ವ್ಯಕ್ತಿ ಅಗ್ನಿಪರೀಕ್ಷೆಗಳಲ್ಲಿ ಬಿದ್ದು, ಬಿದ್ದು ತನ್ನ ಅಹಂಕಾರವೆಲ್ಲ ಸುಟ್ಟಾಗ ಮಾಗುವ ಮನಸ್ಸಿನ ಸ್ಥಿತಿ. ಇಂತಹ ಸ್ಥಿತಿಯನ್ನು ತಲುಪಿರುವ ನಟಿ ಲಕ್ಷ್ಮಿ ಹೇಳಿರುವುದರಲ್ಲಿ ಯಾವುದೇ ತಪ್ಪು, ಅಹಂಕಾರದ ಅಭಿವ್ಯಕ್ತಿ ಕಾಣಿಸುವುದಿಲ್ಲ. ಹಾಗೊಮ್ಮೆ ಕಂಡರೆ ಅದು ನೋಡುವವರ ಅಪ್ರಬುದ್ಧತೆ ಅಥವಾ ನಟಿ ಲಕ್ಷ್ಮಿ ಬಗ್ಗೆ ಅವರಿಗಿರುವ ಅಜ್ಞಾನ ಅಂತ ಮಾತ್ರ ಹೇಳಬಹುದು.
ಇಷ್ಟಕ್ಕೂ ಅವರ ನಿಲುಮೆಯನ್ನೇ ನೋಡಬಹುದಾದರೆ, ವಯಸ್ಸು, ಪರಿಸ್ಥಿತಿ ನಮ್ಮನ್ನು ಅಸಹಾಯಕರನ್ನಾಗಿ ತೋರಿಸಬಾರದು. ಇದ್ದಿದ್ದರಲ್ಲಿಯೇ ಸ್ವಚ್ಛವಾಗಿ, ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಆ ಮಾತಿನ ಅರ್ಥ. ನಿಜ, ಮಹಿಳೆ ಇರಲಿ, ಪುರುಷನಿರಲಿ. ಎಲ್ಲಾ ಸರಿ ಇದ್ದು ನಗುತ್ತೇನೆ ಎನ್ನುವ ಮಾತು ಮೂರ್ಖತನದ್ದು. ಯಾಕೆಂದರೆ ಎಂತಹ ಯಶಸ್ವಿ ಮನುಷ್ಯನಿಗೂ ತನ್ನದೇ ನೋವು, ದುಃಖ, ಬೇರೆ ಬೇರೆ ಅಸಹಾಯಕತೆ ಇದ್ದೇ ಇರುತ್ತದೆ. ಆ ವ್ಯಕ್ತಿಯ ಯಶಸ್ಸಿಗೆ ಬಹಳಷ್ಟು ಜನರು ಕಾರಣರಾಗಿದ್ದರೆ ಒಂಟಿ ಹೋರಾಟದ ಅರಿವು ಇರುವುದಿಲ್ಲ. ಆಗ ಒಬ್ಬಂಟಿ ಹೋರಾಟಗಾರ ಮತ್ತು ಅವನ ಯಶಸ್ಸು ದೂರದ ಬೆಟ್ಟವಾಗಿ ಕಾಣಿಸುತ್ತದೆ. ಆ ಬೆಟ್ಟವನ್ನು ನೋಡುಗರು ತಮಗೆ ಬೇಕಾದ ಹಾಗೆ ವ್ಯಾಖ್ಯಾನಿಸುತ್ತಾರೆ.
ಒಬ್ಬ ಕೂಲಿ ಮಾಡುವ ಅಥವಾ ಕೊಟ್ಟಿಗೆ, ತೋಟಗಳಲ್ಲಿ ಕೆಲಸ ಮಾಡುವ ಹೆಂಗಸಿಗೆ ತನ್ನ ಕೆಲಸಗಳಲ್ಲಿ ಚೆಂದವಾಗಿ ಬಾಚಿಕೊಂಡು ಹರಕು ಸೀರೆಯನ್ನಾದರೂ ಜನರಿಗೆ ಗೊತ್ತಾಗದಂತೆ ಉಟ್ಟುಕೊಳ್ಳುವ ಅಭಿಮಾನ ಇರಬೇಕು. ಅದನ್ನೇ ನಾನು ನೋಡಿದ ನನ್ನ ಆತ್ಮೀಯ ಹೆಣ್ಣುಮಕ್ಕಳು ನನಗೂ ಕಲಿಸಿರುವುದು. ನನ್ನ ಅಜ್ಜಿ, ಅಮ್ಮ ಎಲ್ಲ ಎಷ್ಟೋ ವರ್ಷಗಳಿಗೊಮ್ಮೆ ಹೊಸ ಸೀರೆ ನೋಡುತ್ತಿದ್ದ ದಿನಗಳಿದ್ದವು. ಹಾಸಿಗೆ ಹಿಡಿದ ಪತಿ, ಮಕ್ಕಳು, ಮೊಮ್ಮಗಳು ಇವರನ್ನೆಲ್ಲಾ ನೋಡಿಕೊಳ್ಳುತ್ತ ಸರಿಯುವ ಸಮಯದಲ್ಲಿ ದಿನಕ್ಕೆ ಸ್ನಾನ ಮಾಡಿ, ಒಗೆದ ಮಾಸಲು ಸೀರೆಯನ್ನೇ ಉಡುವ ಹೊತ್ತಲ್ಲಿ ಉದ್ದನೆಯ ಕೂದಲು ಬಾಚಿ, ಅಂಗಳದಲ್ಲಿ ಬೆಳೆದ ಹೂಮುಡಿಯಲು ಅಜ್ಜಿ ಮರೆಯುತ್ತಿರಲಿಲ್ಲ. ಸದಾ ಕೌಟುಂಬಿಕ ದೌರ್ಜನ್ಯ, ಬಡತನ, ಅಸಹಾಯಕತೆಯಲ್ಲಿ ಬೇಯುತ್ತಿದ್ದ ಅಮ್ಮ ಎಂದಿಗೂ ತನ್ನ ಹೊರನೋಟದಲ್ಲಿ ತೋರಿಸಿಕೊಂಡಿದ್ದಿಲ್ಲ. ಉಡುವ ಸೀರೆಯನ್ನೇ ನೀಟಾಗಿ ಮಡಿಕೆ ಮಾಡಿ ತನಗೆ ಬರುವಷ್ಟು ಚೆಂದಾಗಿ ಉಟ್ಟು, ತಲೆಬಾಚಿ ಶಿಸ್ತಾಗಿ ಇರುತ್ತಿದ್ದಳು. ಇವರಿಬ್ಬರ ಈ ಶಿಸ್ತಿಗೆ ಸುತ್ತಲಿನ ಗಂಡಸರು ಒಮ್ಮೆಯಾದರೂ ಅನುಭವಿಸಬೇಕೆಂದುಕೊಂಡರೆ ಅಥವಾ ಜೀವನ ಗೊತ್ತಿಲ್ಲದ ಮಹಿಳೆಯರು ಇವರನ್ನು ಬೇರೆಯದೇ ಸಾಲಿಗೆ ಸೇರಿಸಿ ಆಡಿಕೊಳ್ಳುತ್ತಿದ್ದರು. ಆದರೂ ಒಮ್ಮೆಯೂ ಜನರಿಗೆ ಬಾಯಿಗೆ ಹೆದರಿಯೊ, ಜೀವನದ ಹೊಡೆತಗಳಿಗೆ ಹೆದರಿಯೋ ತಮ್ಮ ಅಸ್ತಿತ್ವವನ್ನು ಮರೆತವರಲ್ಲ. ಇವತ್ತಿಗೂ ೮೫+ ಆಯಿ ಪುಸ್ತಕಗಳನ್ನು ಹುಡುಹುಡುಕಿ ಓದುತ್ತಾಳೆ. ಅಮ್ಮ ತನ್ನೆಲ್ಲಾ ಕೆಲಸಗಳನ್ನು ಬೇಗ ಬೇಗ ಮುಗಿಸಿ ಓದುವುದರಲ್ಲಿಯೇ ತನ್ನ ನೋವುಗಳನ್ನು ಮರೆಯುತ್ತಾಳೆ. ತಾವಾಯಿತು, ತಮ್ಮ ಬದುಕಾಯಿತು ಎಂದು ಬದುಕುವ ಈ ಹೆಣ್ಣುಮಕ್ಕಳು ಎಷ್ಟೇ ಕೆಲಸವಿದ್ದರೂ ಅಚ್ಚುಕಟ್ಟಾಗಿ ಮುಗಿಸಿ ತಮ್ಮದೂ ಎನ್ನುವ ಒಂದು ಸ್ಪೇಸ್ ಕಂಡುಕೊಳ್ಳುತ್ತಿದ್ದುದು, ಸುಂದರವಾಗಿ ಕಾಣಿಸುತ್ತ, ಫಳೆಂಬ ನಗುವಿನಲ್ಲಿ ತಮ್ಮ ಸುತ್ತಲಿನ ವಾತಾವರಣವನ್ನೇ ಬದಲಾಯಿಸುವ ಈ ವ್ಯಕ್ತಿಗಳು ನಿಜಕ್ಕೂ ಅದ್ಭುತ!
ದುಃಖ ಇರುವವರು, ಬಡತನದಲ್ಲಿ ಇರುವವರು, ಸುಂದರವಾಗಿಲ್ಲದಿರುವವರು, ಯಾರಿಗೂ ಬೇಡವಾದವರು ‘ಖುಷಿಯಾಗಿ ಇರುವುದು’ ನಾಟಕ ಎನ್ನುವ ಮನಸ್ಥಿತಿ ಇದೆ ಕೆಲವರಿಗೆ. ಅದು ತೋರುಗಾಣಿಕೆ ಎನ್ನುವವರೂ ಇದ್ದಾರೆ. ಹಾಗೆ ತೋರಿಸಿಕೊಳ್ಳದೇ ಸದಾ ಹರಕು, ಕೊಳಕು, ಗೋಳು, ನೋವಿನ ಕಣ್ಣುಗಳು... ಇವುಗಳನ್ನು ಪ್ರದರ್ಶಿಸುತ್ತಿರುವುದೇ ಅಸಲೀ ವ್ಯಕ್ತಿತ್ವ ಎಂದು ಪ್ರತಿಪಾದಿಸುವವರೂ ಇದ್ದಾರೆ. ಈ ಅಸಲೀ ವ್ಯಕ್ತಿತ್ವ ಯಾರಿಗೆ ಇಷ್ಟವಾಗುತ್ತದೆ ಎಂದರೆ ಜೀವನವೆಂದರೆ ಯಾರೋ ಬರೆದಿಟ್ಟ ಅಚ್ಚುಕಟ್ಟಿನ ಚಿತ್ತಾರವಾಗಿರುವವರಿಗೆ. ಅವರಿಗೆ ತಮ್ಮಂತೆ ಎಲ್ಲವೂ ಇರದ ಅಥವಾ ಏನೂ ಇಲ್ಲದ ವ್ಯಕ್ತಿಗಳು ಸದಾ ಏನೂ ಇಲ್ಲದವರಂತೆಯೇ ಇರಬೇಕು. ಅವರ ಕಣ್ಣಲ್ಲಿ ಇಲ್ಲದವರು ಖುಷಿಯಾಗಿದ್ದರೆ ಏನೋ ಅಸಮಾಧಾನ, ಸಿಟ್ಟು. ಏನೂ ಇಲ್ಲದ ದುಃಖತಪ್ತ ವ್ಯಕ್ತಿಗಳು ಈ ಎಲ್ಲವೂ ಇರುವವರ ಅಹಂ ಅನ್ನು ಪರೋಕ್ಷವಾಗಿ ಪೋಷಿಸುತ್ತಾರೆ. ಈ ಸುಖಸ್ಥರಿಗೆ ಸದಾ ದುಃಖಿಯಾಗಿರುವವರಿಗೆ ಸಮಾಧಾನ ಹೇಳುವುದು ಒಂದು ರೀತಿಯ ಸಮಾಧಾನ ನೀಡುತ್ತದೆ. ಇಂತಹ ವ್ಯಕ್ತಿಗಳೂ ಒಂದೊಮ್ಮೆ ಆ ಪ್ರತಿಮೆಯಿಂದ ಹೊರಬಂದು ಒಳ್ಳೆಯ ಬಟ್ಟೆ, ನಗು ಧರಿಸಿ ಎದುರಿಗೆ ಬರಲಿ. ಇವರ ಅಸಲಿ ದೊಡ್ಡತನ ಹೊರಗೆ ಬೀಳುತ್ತದೆ. ಏನೂ ಇಲ್ಲದ ಇವರಿಗೆ ಎಷ್ಟು ಕೊಬ್ಬು ನೋಡು! ಎಂದು ಹೊಟ್ಟೆಯುರಿದುಕೊಳ್ಳುತ್ತಾರೆ. ಅಯ್ಯೊ ಮೊನ್ನೆ ಮೂರು ಕಾಸಿಗೆ ಯೋಗ್ಯತೆ ಇರಲಿಲ್ಲ. ಈಗ ನೋಡು, ಹೇಗಾಡುತ್ತಾಳೆ/ನೆ ಎಂದು ಅವರವರದೇ ಗುಂಪು ಕಟ್ಟಿಕೊಂಡು ಇವರನ್ನು ಹತ್ತಿಕ್ಕಲು ನೋಡುತ್ತಾರೆ. ಇಂತಹ
ಒಣ ರಾಜಕೀಯವನ್ನು ಸ್ವಂತವಾಗಿ ಬಲ್ಲ ನನ್ನಂತವರಿಗೆ ಈ ಆಟ ಹೊಸದೇನಲ್ಲ. ಫೇಸ್ಬುಕ್ ಅಂತಹ ಮನಸ್ಸುಗಳನ್ನು ಹೊರತೆಗೆದಿಡುತ್ತದೆ. ಮತ್ತು ಎಚ್ಚರವನ್ನೂ ನೀಡುತ್ತದೆ. ಇದಕ್ಕಾಗಿ ಈ ಎಲ್ಲಾ ರಾಜಕೀಯ ನಾಟಕ ಕಲಾವಿದರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ. - ಶೀಲಾ ಭಟ್