ಸಪ್ಟೆಂಬರ್ ೧೦ರ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ೨೫ ಅಂಗಡಿಗಳು ಭಸ್ಮವಾದವು. ಕೋಟ್ಯಾಂತರ ರೂ.ನಷ್ಟವಾಯಿತು. ೨೦೨೪ ಗಣೇಶೋತ್ಸವ ಕಹಿ ನೆನಪಿನೊಂದಿಗೆ ಕೊನೆಗೊಂಡಿತು. ಮುಖ್ಯ ಮಾಧ್ಯಮಗಳಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ವಾಗ್ವಿವಾದ ತಾರಕಕ್ಕೇರಿತು. ಮನೆಯಲ್ಲಿ ಕುಳಿತು ಇವನ್ನೆಲ್ಲ ನೋಡುತ್ತಿದ್ದ ವೀಕ್ಷಕ ಮಾತ್ರ ಗಲಭೆ ಹೇಗಾಯಿತು? ಯಾರ ತಪ್ಪು ಎಂಬ ಗೊಂದಲದಲ್ಲಿದ್ದುದು ಸುಳ್ಳಲ್ಲ. ಹಿಂದೂಗಳು, ಮುಸಲ್ಮಾನರು ಎಂಬ ಪೂರ್ವಾಗ್ರಹದಲ್ಲಿದ್ದ ಸಮಾಜದ ಎಲ್ಲಾ ವರ್ಗದವರು ಈ ಸಂದರ್ಭವನ್ನು ತಮಗೆ ಬೇಕಾದ ಹಾಗೆ ತೆಗೆದುಕೊಂಡರು.
ಇಷ್ಟಕ್ಕೂ ನಾಗಮಂಗಲದ ಗಲಭೆ ಹೊಸತೇನಲ್ಲ. ಸಮಾಜದಲ್ಲಿ ಕೋಮು ಮತ್ತು ಶಾಂತಿ ಸೌಹಾರ್ದ ಕೆಡಿಸುವ ಘಟನೆಗಳು ಎಲ್ಲಾ ಕಾಲಕ್ಕೂ ನಡೆದಿವೆ. ನಡೆಯುತ್ತವೆ, ನಡೆಯಲಿವೆ. ಇಲ್ಲಿ ಪ್ರಶ್ನೆ ಏಳುವುದು ಕಾರಣ ಮತ್ತು ಕಾರಣಕರ್ತರ ಬಗ್ಗೆ ಮಾತ್ರ.
ನಾಯಕನ್ ಸಿನಿಮಾ ನೆನಪಾದರೆ ಆಶ್ಚರ್ಯವಿಲ್ಲ. ಗಲಭೆಯಿಂದ ಲಾಭ ಯಾರಿಗೆ? ಎಂಬ ಪ್ರಶ್ನೆ ಎತ್ತಿದಾಗ ಗಲಭೆಯ ದೋಷಣೆ ಹೊರಿಸಲು ಸಾಧ್ಯವಾಗಿದ್ದು, ಆಡಳಿತಾರೂಢ ಸರ್ಕಾರಕ್ಕೆ ಆರೋಪ ಬಂದಿದ್ದು ಎಲ್ಲಾ ಲಾಭವಾಗಿದ್ದು ವಿರೋಧಪಕ್ಷಕ್ಕೆ. ಜೊತೆಗೆ ಗಲಭೆಯಲ್ಲಿ ಹಾನಿಗೊಂಡ ಬಹುತೇಕ ಅಂಗಡಿಗಳು ಮುಸ್ಲಿಂ ಕೋಮಿಗೆ ಸೇರಿದ್ದು ಇನ್ನೊಂದು ಸಂಶಯಕ್ಕೆ ಕಾರಣ.
ಗಣೇಶೋತ್ಸವದ ಮೆರವಣಿಗೆ ಮಸೀದಿಯ ಬಳಿಗೆ ಹೋಗುವುದು, ಅಲ್ಲಿ ಹೋದ ಮೇಲೆ ಜೈಶ್ರೀರಾಂ ಎಂದು ಕೂಗಿ ಪ್ರಚೋದಿಸುವುದು, ಅದಾಗಲೇ ಕಾದಿದ್ದಂತೆ ಇನ್ನೊಂದು ಗುಂಪು ಕಲ್ಲು ತೂರಾಟ ಮಾಡುವುದು ಇವೆಲ್ಲವೂ ಅವತ್ತಿನ ಘಟನೆ ಪೂರ್ವ ನಿಯೋಜಿತ ಯೋಜನೆಯೇ? ಎಂಬುದಕ್ಕೆ ಪೂರಕವಾಗಿವೆ. ಅಷ್ಟಲ್ಲದೆ, ಪೊಲೀಸ್ ವ್ಯವಸ್ಥೆ ಸರಿಯಾಗಿಲ್ಲದೆ ಅಶ್ರುವಾಯು ಸಿಡಿಸಿದ್ದು, ರಾತ್ರೋ ರಾತ್ರಿ ಅಂಗಡಿಗಳಿಗೆ ನುಗ್ಗಿ ನಾಶ ಮಾಡಿದ್ದು ಇವೆಲ್ಲವೂ ಮೊದಲೇ ಬರೆದ ನಾಟಕದ ದೃಶ್ಯಗಳೇನೋ ಎನಿಸುತ್ತವೆ.
ಪ್ರಕರಣದ ತನಿಖೆಯ ಭಾಗವಾಗಿ ಗುಂಪಿನಲ್ಲಿ ಬಂದ ೫೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದರೆ ಆ ಪಾಲಕರು/ಪೋಷಕರು ತಮ್ಮ ಮಕ್ಕಳು ಅಮಾಯಕರು, ನಿರಪರಾಧಿಗಳು ಎಂದು ಹೇಳಿಕೆ ಕೊಡುತ್ತಿದ್ದಾರೆ. ಮನೆಯ ಹೊರಗೆ ಹೋಗುವ ಗಂಡು ಮಕ್ಕಳು ಏನು ಕೆಲ್ಸ ಮಾಡುತ್ತಾರೆ? ಯಾರೊಂದಿಗೆ ಬೆರೆಯುತ್ತಾರೆ ಎಂಬ ಖಬರಿಲ್ಲದ ಪೋಷಕರು ತಮ್ಮ ಮಕ್ಕಳು ಅಮಾಯಕರೆಂದು ಹೇಗೆ ನಂಬುತ್ತಾರೆ? ಇದೂ ವ್ಯವಸ್ಥಿತ ಸಂಚಿನ ಒಂದು ಭಾಗವೇ? ಎಂಬೆಲ್ಲ ಪ್ರಶ್ನೆಗಳನ್ನು ಮೂಡಿಸುತ್ತವೆ.
ಅದಾಗಲೇ ಶಾಲೆಗಳಲ್ಲಿ ಪೋಷಕರು ಮಕ್ಕಳಲ್ಲಿ ಜಾತಿ, ಕೋಮು, ಆಹಾರದ ವಿಷಯಗಳಲ್ಲಿ ಗೇಲಿ ಮಾಡುವುದು, ತಾರತಮ್ಯ ಮಾಡುವುದು ಮತ್ತು ಪಕ್ಷಪಾತ ಧೋರಣೆಯನ್ನು ಹೊಂದುವುದು ಕಲಿಸಿ ಕಳಿಸುತ್ತಿದ್ದಾರೆ. ಅವರು ದೊಡ್ಡವರಾಗಿ ಈ ರೀತಿಯ ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲಾರರು ಎಂದು ಯಾರಾದರೂ ಹೇಳಬಹುದೆ?
ನಾಗಮಂಗಲದ ಘಟನೆ ಎಲ್ಲಿ, ಯಾವಾಗ ಬೇಕಾದರೂ ನಡೆಯಬಹುದು. ಪೋಷಕರು , ಮಕ್ಕಳು ಎಚ್ಚೆತ್ತು ಕೊಂಡು ರಾಜಕೀಯ ಕುತಂತ್ರಗಳಿಗೆ ತಮ್ಮನ್ನು ಬಲಿಕೊಡದಂತೆ ತಮ್ಮನ್ನು ತಾವೇ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದು ಭವಿಷ್ಯದಲ್ಲಿ ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ಳಲು ಅತ್ಯವಶ್ಯಕ.
No comments:
Post a Comment