ವಯಸ್ಸು ಯಾರನ್ನೂ ಬಿಡುವುದಿಲ್ಲ. ದೇಹ ಮತ್ತು ಮನಸ್ಸು ಕಾಲ ಚಲಿಸಿದಂತೆ ಮಾಗುತ್ತವೆ. ಇದು ಬದುಕಿನ ಸೌಂದರ್ಯ. ಈ ಸುಂದರ, ಸಹಜ ಮಾಗುವಿಕೆ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಬಹಳ ಸಂದರ್ಭ ವಯಸ್ಸಿಗಿಂತ ಮೊದಲೇ ವಯಸ್ಸಾದಂತೆ ಕಾಣುತ್ತೇವೆ. ಇದನ್ನು ತಪ್ಪಿಸಲು ಕೆಲವು ಸರಳ ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಮುಪ್ಪಿನ ಕಳೆ ಮೈ-ಮನಸ್ಸಿಗೆ ಬರದಂತೆ ನೋಡಿಕೊಳ್ಳಬಹುದು.
೧. ಆಹಾರ - ಪ್ರತಿದಿನ ಒಳ್ಳೆಯ ಗುಣಮಟ್ಟದ ಆಹಾರ ಸೇವಿಸುವುದು ಆರೋಗ್ಯಕ್ಕೆ ಅನುಕೂಲ. ಸಸ್ಯಾಹಾರಿಗಳಾಗಿದ್ದರೆ ದಿನಕ್ಕೆ ಒಂದು ಲೋಟ ಹಾಲು, ಒಂದು ಹಣ್ಣು, ಪಲ್ಯ, ಸೊಪ್ಪು, ತರಕಾರಿಗಳಿರುವ ರೊಟ್ಟಿ ಅಥವಾ ಮುದ್ದೆ ಊಟ, ಮೊಸರು/ಮಜ್ಜಿಗೆ ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಮೀನು, ಮೊಟ್ಟೆಗಳ ಜೊತೆಗೆ ಸಸ್ಯಾಹಾರವನ್ನೂ ಸೇರಿಸಿಕೊಂಡರೆ ದೇಹದ ವಯಸ್ಸಾಗುವಿಕೆ ನಿಧಾನವಾಗುತ್ತದೆ.
೨. ನೀರು - ಪ್ರತಿನಿತ್ಯ ೨ ಲೀ. ನೀರು ದೇಹಕ್ಕೆ ಬೇಕು. ಅದಕ್ಕಿಂತಲೂ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ , ಬಾಯಿ ತೊಳೆಯುವ ಮೊದಲು ಒಂದೆರಡು ಲೋಟ ನೀರು ಕುಡಿದರೆ ದೇಹದೊಳಗೆ ನಿರ್ಜಲವಾಗುವಿಕೆ ತಪ್ಪುತ್ತದೆ. ಚರ್ಮ ಸುಕ್ಕುಗಟ್ಟದೆ ಹೊಳಪಾಗಿರುತ್ತದೆ.
೩. ನಿದ್ದೆ - ಪ್ರತಿದಿನ ಕನಿಷ್ಠ ೫ - ೮ ಗಂಟೆಗಳ ಕಾಲ ಅವರವರ ಚಟುವಟಿಕೆ, ಅಭ್ಯಾಸಗಳಿಗೆ ತಕ್ಕಂತೆ ನಿದ್ದೆ ಮಾಡಬೇಕು. ಇದೂ ಸಹ ದೇಹದ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ನಿದ್ದೆ ಮಾಡಿದರೆ ಬೇಗನೆ ವಯಸ್ಸಾಗುವುದು ಖಚಿತ.
೪. ಚಟುವಟಿಕೆ - ದೇಹ ಮತ್ತು ಮನಸ್ಸು ಎಷ್ಟು ರಚನಾತ್ಮಕವಾಗಿ ಚಟುವಟಿಕೆಯಿಂದ ಕೂಡಿರುತ್ತವೆಯೊ ಅಷ್ಟು ವಯಸ್ಸು ಕಡಿಮೆಯಾಗುತ್ತದೆ. ಮನೆಯ ಒಳ - ಹೊರಗೆ ಎಷ್ಟು ಪರಾವಲಂಬಿಗಳಾಗುತ್ತೀರಿ, ಎಷ್ಟು ಆರಾಮವಾಗಿರುತ್ತೀರಿ ಅಷ್ಟು ದೇಹದ ಅವಯವಗಳು ತಪ್ಪು ಸಂದೇಶ ಸ್ವೀಕರಿಸುತ್ತವೆ. ಆಕ್ಟಿಯೋಪರಿಕ್ಸ್ ತರಹ ದೇಹದ ಅಂಗಾಂಗಗಳು ತಾವು ನಿರುಪಯುಕ್ತ ಎಂದು ತೀರ್ಮಾನಿಸಿ ನಿಷ್ಕ್ರಿಯಗೊಳ್ಳತೊಡಗುತ್ತವೆ. ಆದ್ದರಿಂದ ದೇಹವನ್ನು ಚಟುವಟಿಕೆಯಿಂದ, ಚುರುಕಾಗಿ ಇಟ್ಟುಕೊಳ್ಳಬೇಕು.
೫. ಚಿಂತನೆ - ದೇಹಕ್ಕೂ , ಮನಸ್ಸಿಗೂ ಅವಿನಾಭಾವ ಸಂಬಂಧ. ಮನಸ್ಸು ಚಿಂತೆ ಮಾಡಬಾರದು. ಚಿಂತನೆ ಮಾಡಬೇಕು. ಜೀವನದ ಎಲ್ಲಾ ಆಗುಹೋಗುಗಳನ್ನು ಸಮಚಿತ್ತದಿಂದ ಎದುರಿಸಬೇಕು. ಧನಾತ್ಮಕವಾದ ಚಿಂತನೆ ಮಣಿಪೂರ ಚಕ್ರವನ್ನು ಸದೃಢವಾಗಿಡುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗಿ ದೇಹ ಹಗುರವಾಗಿ ಇರುತ್ತದೆ. ಅಸೂಯೆ, ಸಿಟ್ಟು, ದ್ವೇಷ ಮತ್ತು ಸ್ವಾನುಕಂಪದಿಂದ ಯಾವಾಗಲೂ ಒಂದು ದೂರವನ್ನು ಕಾಯ್ದುಕೊಳ್ಳಬೇಕು. ಇದರಿಂದ ಸಹ ದೇಹ ವಯಸ್ಸಾಗದೆ ಯೌವನದಿಂದ ಹೊಳೆಯುತ್ತಿರುತ್ತದೆ.
೬. ನಿಶ್ಚಿತ , ನಿರಂತರ, ನಿರುದ್ವೇಗ ಬದುಕು - ಆರ್ಥಿಕವಾಗಿ ನಿಶ್ಚಿತ ಆದಾಯ ಬರುವ, ನಿರಂತರವಾಗಿ ಮಾಡಲು ಕೆಲಸ ಇರುವ ಯಾವುದೇ ಉದ್ವೇಗ, ಗೊಂದಲಗಳಿಗೆ ಅವಕಾಶ ಇಲ್ಲದ ಜೀವನವನ್ನು ರೂಪಿಸಿಕೊಳ್ಳಿ. ಇದು ಮೊದಲ ೪ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಜಗತ್ತಿನ ಸುರ-ಸುಂದರಿಯರೆಲ್ಲರ ಸೌಂದರ್ಯದ ಗುಟ್ಟು ತೆಗೆದಾಗ ಈ ೬ ಅಂಶಗಳನ್ನು ಸಾಮಾನ್ಯವೆಂದು ಗುರುತಿಸಲಾಗಿದೆ. ನೀವೂ ಈ ಸೂತ್ರಗಳನ್ನು ಅನುಸರಿಸಿ, ಚಿರಯೌವನಿಗರಾಗಿ.